Total Rs. 0
Full Information of an Event
Back to Home | Other News
ಖ್ಯಾತ ಹಿನ್ನೆಲೆ ಗಾಯಕ ಪದ್ಮಭೂಷಣ ಡಾ. ಕೆ.ಜೆ.ಜೇಸುದಾಸ್ 75ನೇ ಹುಟ್ಟುಹಬ್ಬ: ಕೊಲ್ಲೂರು ಭೇಟಿ

ಕೊಲ್ಲೂರು: ಪ್ರತೀ ವರ್ಷದಂತೆ ಈ ವರ್ಷವೂ ಕೂಡಾ ದಕ್ಷಿಣ ಭಾರತದ ಖ್ಯಾತ ಹಿನ್ನೆಲೆ ಗಾಯಕ ಪದ್ಮಭೂಷಣ ಡಾ. ಕೆ.ಜೆ.ಜೇಸುದಾಸ್ ಅವರು ತಮ್ಮ 75ನೇ ಹುಟ್ಟುಹಬ್ಬದ ಪ್ರಯುಕ್ತ ಶ್ರೀಕ್ಷೇತ್ರ ಕೊಲ್ಲೂರು ಶ್ರೀಮೂಕಾಂಬಿಕಾ ದೇವಳಕ್ಕೆ ಭೇಟಿ ನೀಡಿ, ಚಂಡಿಕಾ ಹೋಮ ನೆರವೇರಿಸವುದರ ಮೂಲಕ ಅತ್ಯಂತ ಸರಳವಾಗಿ ಆಚರಿಸಿಕೊಂಡರು

ಪತ್ನಿ ಪ್ರಭಾ ದಾಸ್ ಹಾಗೂ ಹಿರಿಯ ಪುತ್ರ ವಿನೋದ ಅವರೊಂದಿಗೆ ಶುಕ್ರವಾರ ರಾತ್ರಿ ಕೊಲ್ಲೂರಿಗೆ ಆಗಮಿಸಿದ ಅವರು ಶನಿವಾರ ಬೆಳಗ್ಗೆ ದೇವರ ದರ್ಶನ ಪಡೆದರು. ಬಳಿಕ ದೇವಸ್ಥಾನದ ಪ್ರಾಂಗಾಣದಲ್ಲಿ ಹಾಕಲಾದ ವೇದಿಕೆಯಲ್ಲಿ ನಡೆದ ಭಕ್ತಿ ಸಂಗೀತ ಕಛೇರಿಯಲ್ಲಿ ಮೂರು ಮಲೆಯಾಳಂ ಹಾಗೂ ಒಂದು ಕನ್ನಡ ಭಕ್ತಿ ಗೀತೆ (ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ) ಗಳನ್ನು ಹಾಡಿ ಶ್ರೀ ದೇವಿಗೆ ಸಂಗೀತ ಸೇವೆಯನ್ನು ಅರ್ಪಿಸಿದರಲ್ಲದೇ ಸೇರಿದ ಸಹಸ್ರಾರು ಭಕ್ತರಿಗೆ ಭಕ್ತಿಸಾಗರದಲ್ಲಿ ತೇಲಿಸಿದರು. ಕಾಂಜ್ಞಗಾಡು ರಾಮಚಂದ್ರನ್ ಹಾಗೂ ಇತರ ಪ್ರಸಿದ್ದ ಕಾಲಾವಿದರು ಅವರಿಗೆ ಹಿಮ್ಮೇಳನದಲ್ಲಿ ಸಾಥ್ ನೀಡಿದರು.

ತಮ್ಮ ನೆಚ್ಚಿನ ಗಾಯಕ ಜೇಸುದಾಸ್ ಅವರ ಹುಟ್ಟು ಹಬ್ಬದ ಆಚರಣೆಗಾಗಿ ಕೇರಳ ಹಾಗೂ ದೇಶದ ವಿವಿಧ ಭಾಗಗಳಿಂದ ಬಂದಿದ್ದ ದೊಡ್ಡ ಸಂಖ್ಯೆಯ ಅಭಿಮಾನಿಗಳು, ಸಂಗೀತ ಕಚೇರಿಯ ಮಧುರ ಘಳಿಗೆಗೆ ಸಾಕ್ಷಿಗಳಾಗಿದ್ದರು. ಶ್ರೀ ಕ್ಷೇತ್ರದ ಹಿರಿಯ ಅರ್ಚಕರಾದ ಎನ್.ಗೋವಿಂದ ಅಡಿಗ ಹಾಗೂ ತಂತ್ರಿ ರಾಮಚಂದ್ರ ಅಡಿಗ ಅವರ ನೇತ್ರತ್ವದಲ್ಲಿ ವಿವಿಧ ಪೂಜಾ ವಿಧಿಗಳನ್ನು ನೆರವೇರಿಸಿದ ಜೇಸುದಾಸ್ ಕುಟುಂಬಿಕರು, ಬಳಿಕ ಶ್ರೀದೇವಿಯ ದರ್ಶನ ಪಡೆದರು.

1967 ನೇ ಇಸವಿಯಿಂದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಿಯ ಅನನ್ಯ ಭಕ್ತರಾಗಿರುವ ಅವರು 1972 ರಿಂದ ನಿರಂತರವಾಗಿ, ಪ್ರತಿ ವರ್ಷದ ಜನವರಿ 10 ರಂದು ಇಲ್ಲಿಗೆ ಭೇಟಿ ನೀಡಿ, ಶ್ರೀದೇವಿಗೆ ಚಂಡಿಕಾಹೋಮದ ಪೂಜೆಯನ್ನು ನೀಡಿದ ಬಳಿಕ ಸಂಗೀತ ಸೇವೆಯನ್ನು ಅರ್ಪಿಸುವುದನ್ನು ಪರಿಪಾಠವನ್ನಾಗಿಸಿಕೊಂಡಿದ್ದಾರೆ.

ಶ್ರೀ ಕ್ಷೇತ್ರದಿಂದ ಅಭಿನಂದನೆ: ಶ್ರೀ ಕ್ಷೇತ್ರದ ಅನನ್ಯ ಭಕ್ತರಾಗಿರುವ ಹಾಗೂ ದಕ್ಷಿಣ ಭಾರತದ ಪ್ರಸಿದ್ದ ಗಾಯಕರಾಗಿರುವ ಡಾ.ಕೆ.ಜೆ ಜೇಸುದಾಸ್ ಅವರ 75 ವರ್ಷದ ಹುಟ್ಟುಹಬ್ಬದ ಸಂಭ್ರಮಕ್ಕಾಗಿ, ಶನಿವಾರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ ಡಾ.ಜೇಸುದಾಸ್ ಹಾಗೂ ಪ್ರಭಾ ಜೇಸುದಾಸ್ ಅವರನ್ನು ಕ್ಷೇತ್ರದ ವತಿಯಿಂದ ಗೌರವಿಸಿದರು.

ದೇಗುಲದ ಕಾರ‍್ಯನಿರ್ವಹಣಾಧಿಕಾರಿ ಎಲ್.ಎಸ್ ಮಾರುತಿ, ಸಹಾಯಕ ಕಾರ‍್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ, ಅಧೀಕ್ಷಕ ರಾಮಕೃಷ್ಣ ಅಡಿಗ ಹಾಗೂ ವ್ಯವಸ್ಥಾಪನಾ ಸಮಿತಿಯ ಸದಸ್ಯ ಜಯಾನಂದ ಹೋಬಳಿದಾರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Back to Home | Other News