Total Rs. 0
Full Information of an Event
Back to Home | Other News
ಕೇರಳದ ಜನರಿಗೆ ಯಾಕೆ ಕೊಲ್ಲೂರ ಮೂಕಾಂಬಿಕೆ ಕುಲದೇವರು ?
ಅದು ಕಾಲಡಿ ಅಂದಿನ ಕೇರಳದ ಒಂದು ಪುಟ್ಟ ಊರು.ತಂದೆ ಇಲ್ಲದ ತಬ್ಬಲಿಯಾದ ಬಾಲ ಶಂಕರ ತನ್ನ ಎಳವೆಯ ಬಾಲ್ಯದಲ್ಲೇ ಸನ್ಯಾಸ ದೀಕ್ಷೆಯನ್ನು ತೊಡುತ್ತಾನೆ. ಇದ್ದ ಒಬ್ಬನೇ ಮಗ ಸನ್ಯಾಸಿಯಾಗುತ್ತಾನೆ ಅಂದಾಗ ವಿಧವೆಯಾದ ತಾಯಿ ಆರ್ಯಂಬೆ ದಿಕ್ಕು ತೋಚದೆ ಮಗನನ್ನು ಅಪ್ಪಿ ಹಿಡಿದು ಅತ್ತು ಕೇಳುತ್ತಾಳೆ ‘ ನಾನು ಸಾಯುವಾಗ ಒಂದು ತೊಟ್ಟು ನೀರು ಬಿಟ್ಟು ನನ್ನ ಚಿತೆಗೆ ಕೊಳ್ಳಿ ಇಡುವವರು ಯಾರಿದ್ದಾರೆ ? ನನಗೆ ಕಡೆಗಾಲ ಬಂದಾಗ ನಿನ್ನನ್ನು ಎಲ್ಲಿ ಹುಡುಕಲಿ ?” ಎನ್ನುತ್ತಾ ಕರುಳು ಕಿತ್ತು ಬರುವ ಹಾಗೆ ಅಳುತ್ತಾಳೆ” ಅಮ್ಮ ನಿನ್ನ ಕಡೆಗಾಲ ಬಂದಾಗ ಏಕ ಮನಸ್ಸಿನಿಂದ ನನ್ನನ್ನು ಜ್ಞಾನಿಸು, ನೀನು ಜ್ಞಾನ ಮಾಡಿ ಕರೆದ ಅರೆ ಕ್ಷಣದಲ್ಲಿ ನಿನ್ನಕಣ್ಣ ಮುಂದೆ ನಿಂತು ನಿನ್ನ ಕಾರ್ಯಗಳನ್ನೆಲ್ಲಾ ನಡೆಸಿಕೊಡುತ್ತೇನೆ” ಎಂದು ತಾಯಿಗೆ ಸಮಾಧಾನದ ಮಾತುಗಳನ್ನು ಹೇಳಿ ಹಿಂದೂ ಧರ್ಮದ ಪುನರುತ್ಥಾನಕ್ಕಾಗಿ ದೇಶ ಪರ್ಯಟನೆಗೆ ಹೊರಡುತ್ತಾನೆ‌. ಅದೊಂದು ದಿನ ತಾಯಿ ಆರ್ಯಂಬೆ ತಾನು ಸಾಯುವ ಕಾಲ ಸಮಿಸುತ್ತಿದೆ ಅನ್ನುವಾಗ ಮಗ ಶಂಕರ ಹೇಳಿದಂತೆ ಮನಸ್ಸಿನಲ್ಲೆ ಸಾವಿನ ಮಂಚದಿಂದ ಮಗನನ್ನು ಕೂಗಿ ಕರೆಯುತ್ತಾಳೆ. ತಾಯಿಯ ಕರುಳಿನ ಕೂಗು ಶಂಕರಾಚಾರ್ಯರಿಗೆ ಮುಟ್ಟುತ್ತದೆ. ತಡ ಮಾಡದೆ ತಾಯಿಯ ಮುಂದೆ ನಿಲ್ಲುತ್ತಾರೆ ಶಂಕರಾಚಾರ್ಯರು!!

ತನ್ನ ಮಗನನ್ನು ಕಣ್ಣು ತುಂಬಾ ನೋಡಿದ ತಾಯಿ ಮಗ ಬಿಟ್ಟ ತುಳಸಿ ನೀರಿನೊಂದಿಗೆ ನೆಮ್ಮದಿಯಿಂದ ಪ್ರಾಣ ಬಿಡುತ್ತಾಳೆ. ಶಂಕರಾಚಾರ್ಯರಿಗೆ ಅಗ್ನಿ ಪರೀಕ್ಷೆಯಾಗುತ್ತದೆ ತಾಯಿಯ ಸಾವು. ತಾನು ಸನ್ಯಾಸಿಯಾಗಿ ತಾಯಿಯ ಹೆಣವನ್ನು ಸಂಸ್ಕಾರ ಮಾಡುವ ಹಾಗಿಲ್ಲ. ತನ್ನ ತಾಯಿ ವಿಧವೆ ಅನ್ನುವ ಕಾರಣಕ್ಕೆ ಊರ ಮಂದಿ ಯಾರೂ ಸಹಾಯ ಮಾಡುವುದಿಲ್ಲ. ಇನ್ನು ಕೆಲವರು ಸಹಾಯ ಮಾಡಲು ಬಂದವರನ್ನು ಸಹಾಯ ಮಾಡಲು ಬಿಡುವುದಿಲ್ಲ. ನಿಸಾಹಯಕರಾಗಿ ತಾಯಿ ಕೊಲ್ಲೂರ ಮೂಕಾಂಬಿಕೆಯನ್ನು ನೆನೆದು ಬಿಡುತ್ತಾರೆ. ಪವಾಡ ನಡೆದೇ ಹೋಗುತ್ತದೆ. ತಾಯಿ ದೇಹ ಯೋಗ ಮಾಯೆಯ ಅಗ್ನಿಯಿಂದ ಸುಡುತ್ತಾರೆ. ಇಂತಹ ಕ್ಲಿಷ್ಟ ಸಮಯದಲ್ಲೂ ಸಹಾಯ ಮಾಡದ ಊರ ಜನರ ಮೇಲೆ ಕೋಪ ತಾನಾಗಿಯೇ ಮೂಡುತ್ತದೆ. ವಿಧವೆ ಎಂದು ತಾತ್ಸಾರದಿಂದ ನೋಡಿದ ಈ ಊರಲ್ಲಿ ಎಲ್ಲರೂ ವಿಧವೆಯರಾಗಿ ಇರಲಿ ಎಂದು ಶಪಿಸಿ ಹೊರಟು ಹೋಗುತ್ತಾರೆ. ದಿನ ಕಳೆದಂತೆ ಶಾಪ ಫಲಿಸುತ್ತದೆ. ಅನೇಕ ಮಾಂಗಲ್ಯಗಳು ಕಳಚಿ ಬೀಳುತ್ತವೆ. ಮೂಢ ನಂಬಿಕೆಗಳ ಗೋಡೆ ನಶಿಸಿ ಹೋಗಿ ತಮ್ಮ ತಪ್ಪಿನ ಅರಿವಾಗುತ್ತದೆ. ಓಡೋಡಿ ಬಂದು ಶಂಕರಾಚರ್ಯರಲ್ಲಿ ಕ್ಷಮೆಯನ್ನು ಕೇಳಿ ತಪ್ಪನ್ನು ಮನ್ನಿಸುವಂತೆ ಬೇಡಿಕೊಳ್ಳುತ್ತಾರೆ.

ಕರುಣೆಗೊಂಡ ಶಂಕರಾಚಾರ್ಯರು ಕನಿಕರದಿಂದ ‘ ಮಂಗಳ ಪ್ರದಾಯಿನಿಯಾದ ಕೊಲ್ಲೂರ ಮೂಕಾಂಬಿಕೆಯ ದರ್ಶನವನ್ನು ಮಾಡಿದರೆ ನಿಮ್ಮ ಸಕಲ ವಿಘ್ನಗಳೂ ದೂರವಾಗಿ, ನಿಮ್ಮ ಮಾಂಗಲ್ಯಗಳು ಗಟ್ಟಿಯಾಗುತ್ತವೆ ಎಂದು ಪರಿಮಾರ್ಜನೆಯ ದಾರಿ ತೋರಿಸುತ್ತಾರೆ. ವಿಧವೆಯರು ಅಮಂಗಳೆಯರಲ್ಲ ಅನ್ನುವುದಕ್ಕೆ ಬಿಳಿಯ ಸೀರೆ ಉಡುವ ಸಂಪ್ರದಾಯ ಅಂದಿನಿಂದ ಕೇರಳದಲ್ಲಿ ಶುರುವಾಗುತ್ತದೆ. ಅಂದಿನಿಂದ ಕೇರಳದ ಜನರು ಕೊಲ್ಲೂರು ಮೂಕಾಂಬಿಕೆಯನ್ನು ತಮ್ಮ ಕುಲದೇವರಾಗಿ ಆರಾಧಿಸುತ್ತಾರೆ. ಹಾಗಾಗಿ ತಾಯಿ ಮೂಕಾಂಬಿಕೆ ಸನ್ನಿಧಿಯಲ್ಲಿ ಕೇರಳದ ಜನರು ಸದಾ ಆಗಮಿಸಿ ತಾಯಿ ದರ್ಶನ ಪಡೆಯುವುದು ವಿಶೇಷ.
Back to Home | Other News