Total Rs. 0
Full Information of an Event
Back to Home | Other News
ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ನವರಾತ್ರಿ ಉತ್ಸವ ಆರಂಭ - 13th Oct - Oct 22
ಕೊಲ್ಲೂರು: ಸಹಸ್ರಾರು ಭಕ್ತರ ಭಾವನೆ, ಜೀವನಪ್ರಾಪ್ತಿ ಹಾಗೂ ಸಂತೃಪ್ತಿಗಳಿಗೆ ಸೀಮಿತವಾಗಿರುವ ಕೊಲ್ಲೂರು ಶ್ರೀ ಮೂಕಾಂಬಿಕೆಯ ಸಾನ್ನಿಧ್ಯವು ಅ. 13ರಿಂದ ಅ. 22ರವರೆಗೆ ನಡೆಯುವ ನವರಾತ್ರಿ ಉತ್ಸವಕ್ಕೆ ಸಜ್ಜಾಗಿದ್ದು ಭಕ್ತರ ಅನುಕೂಲತೆಗೆ ಸಕಲ ಸೌಕರ್ಯ ಒದಗಿಸಲಾಗಿದೆ.

ಪ್ರಕೃತಿರಮ್ಯ ಸೌಂದರ್ಯದ ನೆಲೆ ಬೀಡಾಗಿರುವ ಕೊಲ್ಲೂರಿನ ಪವಿತ್ರವಾದ ಸೌಪರ್ಣಿಕಾ ನದಿಯಲ್ಲಿ ಮಿಂದು ಒದ್ದೆಬಟ್ಟೆಯಲ್ಲೇ ಶ್ರೀ ದೇವಿಯ ದರ್ಶನ ಮಾಡಿದರೆ ರೋಗರುಜಿನ ಸಮೇತ ಪಾಪ ಪರಿಹಾರವಾಗುವುದೆಂಬ ಪ್ರತೀತಿಗೆ ಪೂರಕವಾದ ಅನೇಕ ನಿದರ್ಶನಗಳಿವೆ.

ಕೋಲಾಪುರೇಶ್ವರಿಯಾಗಿರುವ ಮಹಾಲಕ್ಷ್ಮೀ ಮೋಕ್ಷದಾಯಕವಾದ ಸಪ್ತಕ್ಷೇತ್ರಗಳಲ್ಲೊಂದಾದ ಕೊಲ್ಲೂರು ಸಿದ್ಧಿಕ್ಷೇತ್ರವಾಗಿದೆ. ಸುಂದರ ಪ್ರಕೃತಿಯ ನಡುವೆ ನೀಲಿ ಆಕಾಶವನ್ನು ಸಂಗಮಿಸುವ ಕೊಡಚಾದ್ರಿ ಬೆಟ್ಟವು ಈ ಕ್ಷೇತ್ರದ ಮೂಲಸ್ಥಾನ. ಇಲ್ಲಿ ಕಾಲ್ನಡಿಗೆಯಲ್ಲಿ ಸಾಗಿದರೆ ಸುಮಾರು ಕಿ. ಮೀ. ದೂರ ವ್ಯಾಪ್ತಿಯಷ್ಟು ಸಾಗಬೇಕಾಗಿದ್ದು ಬೆಟ್ಟದ ತುದಿಯಲ್ಲಿರುವ ಸರ್ವಜ್ಞ ಪೀಠ ಮತ್ತು ಮಧ್ಯಭಾಗದಲ್ಲಿರುವ ಚಿತ್ರಮೂಲ ಶ್ರೀ ಶಂಕರಾಚಾರ್ಯರು ತಪಸ್ಸು ಮಾಡಿದ ಪವಿತ್ರ ಸ್ಥಾನವಾಗಿದೆ. ಚಿತ್ರಮೂಲದಲ್ಲಿ ಭಗವತ್ಪಾದರ ತಪೋಧಾರೆ ಹರಿದಂತೆ ಸೌಪರ್ಣಿಕ ನದಿಯ ಜಲಧಾರೆ ಸದಾ ಜಿನುಗುತ್ತಿರುತ್ತದೆ. 64 ಔಷಧೀಯ ಗಿಡಮೂಲಿಕೆಯನ್ನು ಹೊಂದಿರುವ ಈ ಪವಿತ್ರ ಕ್ಷೇತ್ರವು ಧ್ಯಾನಾಸಕ್ತರು ಹಾಗೂ ಯಾತ್ರಿಕರ ತಪೋಭೂಮಿಯಾಗಿದೆ.

ಇಲ್ಲಿನ ವಿಶಿಷ್ಟತೆ ಎಂಬಂತೆ ಅ. 21ರಂದು ರಾತ್ರಿ ನಡೆಯುವ ರಥೋತ್ಸವ ಹಾಗೂ ಅ. 22ರಂದು ನಡೆಯುವ ವಿಜಯದಶಮಿ ವಿದ್ಯಾರಂಭವು ದೇಶವಿದೇಶಗಳ ಸಹಸ್ರಾರು ಭಕ್ತರನ್ನು ಆಕರ್ಷಿಸಿದೆ.

ವಿದ್ಯಾರಂಭಕ್ಕೆ ದಕ್ಷಿಣ ಭಾರತ ಹಾಗೂ ಉತ್ತರ ಭಾರತದಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ತಮ್ಮ ಪುಟ್ಟಮಕ್ಕಳನ್ನು ಕರೆತಂದು ಸರಸ್ವತಿ ಮಂಟಪದಲ್ಲಿ ಮಕ್ಕಳ ನಾಲಿಗೆಯ ಮೇಲೆ ಓಂಕಾರವನ್ನು ಬರೆಸುವ ಪದ್ಧತಿಯು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ದೇಗುಲಕ್ಕೆ ಆಗಮಿಸುವ ಭಕ್ತರ ವಾಸ್ತವ್ಯಕ್ಕೆ ಸಂಪೂರ್ಣ ವ್ಯವಸ್ಥೆಯನ್ನು ಏರ್ಪಡಿಸಲಾಗಿದ್ದು ಯಾವುದೇ ಕೊರತೆಯಾಗದಂತೆ ನಿಗಾ ವಹಿಸಲಾಗಿದೆ ಎಂದು ದೇವಳದ ಆಡಳಿತ ಧರ್ಮದರ್ಶಿ ಕೃಷ್ಣಪ್ರಸಾದ ಅಡ್ಯಂತಾಯ ಹಾಗೂ ಕಾರ್ಯನಿರ್ವಹಣಾಧಿಕಾರಿ ವಿ. ಪ್ರಸನ್ನ ಅವರು ತಿಳಿಸಿದ್ದಾರೆ.
Back to Home | Other News