Total Rs. 0
Full Information of an Event
Back to Home | Other News
ಕೊಲ್ಲೂರಿನ ಆನೆಝರಿ ನಿಸರ್ಗಧಾಮ (ಬಟರ್‌ಪ್ಲೈ ಪಾರ್ಕ್) ದಲ್ಲಿ ಜರುಗಿದ 58ನೇ ವನ್ಯಜೀವಿ ಸಪ್ತಾಹ
ಬೈಂದೂರು: ಕ್ರೂರ ಜನರಿಂದ ಕಾಡಿನ ಸಂಪತ್ತು ಮತ್ತು ವನ್ಯ ಜೀವಿಗಳು ನಾಶವಾಗುತ್ತಿದೆ. ಇಂತಹವರನ್ನು ಹುಡುಕಿ ಅತ್ಯಂತ ಕಠಿಣ ಶಿಕ್ಷೆ ಕೊಡಬೇಕು. ಎಂದು ಬೈಂದೂರು ಶಾಸಕ ಕೆ.ಲಕ್ಷ್ಮೀನಾರಾಯಣ ಹೇಳಿದರು.

ಕರ್ನಾಟಕ ಅರಣ್ಯ ಇಲಾಖೆಯ ಕುಂದಾಪುರ ವಿಭಾಗ, ಕುದುರೆಮುಖ ವನ್ಯಜೀವಿ ವಿಭಾಗ ಕಾರ್ಕಳ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಕೊಲ್ಲೂರಿನ ಆನೆಝರಿ ನಿಸರ್ಗಧಾಮ (ಬಟರ್‌ಪ್ಲೈ ಪಾರ್ಕ್) ದಲ್ಲಿ ಜರುಗಿದ 58ನೇ ವನ್ಯಜೀವಿ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು. ವನ್ಯಜೀವಿಗಳು ನಮ್ಮನ್ನು ನಾಶ ಮಾಡಲು ನಮ್ಮ ಮನೆಗೆ ಬರುವುದಿಲ್ಲ.

ನಾವೇ ಹೋಗಿ ಬೇಟೆಯಾಡುವುದು, ಅವುಗಳ ನಾಶ ಮತ್ತು ಮರಗಳನ್ನು ಕಡಿದು ಪ್ರಕೃತಿ ನಾಶಮಾಡುವ ಅಧಿಕಾರ ನಮಗಿಲ್ಲ. ಪ್ರತಿಯೊಂದು ಪ್ರಾಣಿಗೂ ಜೀವಿಸುವ ಸ್ವಾತಂತ್ರವಿದ್ದು, ಇದರ ರಕ್ಷಣೆಗಾಗಿ ನಾವೆಲ್ಲರೂ ಪ್ರತಿಜ್ಞೆ ಮಾಡಬೇಕೆಂದು ಕರೆನೀಡಿದರು. ಅರಣ್ಯನಾಶವಾಗುವುದರಿಂದ ಕಾಡುಪ್ರಾಣಿಗಳು ಆಹಾರದ ಕೊರತೆಯಿಂದ ಕೆಲವೊಮ್ಮೆ ಊರಿಗೆ ಬಂದಿದ್ದನ್ನು ನಾವು ನೋಡಿದ್ದೇವೆ. ಅದರ ಕಾಳಜಿ, ಸಂರಕ್ಷಣೆಯನ್ನು ನಾವು ಪಾಲಿಸಬೇಕು ಎಂದು ತಿಳಿಸಿದರಲ್ಲದೇ, ನೆರೆದ ಸಾವಿರಾರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಭೋದಿಸಿದರು. ಸೇರಿದವರೆಲ್ಲ ಪ್ರತಿಜ್ಞೆ ಸ್ವೀಕರಿಸಿದರು.

ವನ್ಯಜೀವಿಗಳಿಗೆ ಸಂಬಂಧಿಸಿದ ಛಾಯಾಚಿತ್ರ ಪ್ರದರ್ಶನ ಮತ್ತು ಸ್ವರ್ದೆ, ವಿದ್ಯಾರ್ಥಿಗಳಿಗೆ ಸಸ್ಯ ಮತ್ತು ಪಕ್ಷಿ ಗುರುತಿಸುವಿಕೆ, ರೈತರೊಂದಿಗೆ ಸಂವಾದ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನದಂತಹ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸುಂದರವಾದ ಪ್ರಕೃತಿಯ ಮಡಿಲಲ್ಲಿ ಶಾಲಾ ವಿದ್ಯಾರ್ಥಿಗಳು ಕಾಡಿನಲ್ಲಿ ವಿಹರಿಸಿದರು. ಕೊಲ್ಲೂರು ದೇವಸ್ಥಾನದ ವತಿಯಿಂದ ಬೆಳಗ್ಗಿನ ಉಪಹಾರ ಮತ್ತು ಮದ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು. ಆಕಾಶವಾಣಿ ಕಲಾವಿದ ಗಣೇಶ್‌ಗಂಗೊಳ್ಳಿ ಮತ್ತು ತಂಡದವರಿಂದ ಪರಿಸರದ ಕುರಿತಾದ ಸಂಗೀತ ರಸಮಂಜರಿ ನಡೆಯಿತು.

ಕೊಲ್ಲೂರು ಗ್ರಾ.ಪಂ ಅಧ್ಯಕ್ಷ ಉದಯ ಶೇರುಗಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕುಂದಾಪುರ ಸಹಾಯಕ ಕಮಿಷನರ್ ಸದಾಶಿವಪ್ರಭು, ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಶರ್ಮ, ಜಿಲ್ಲೆಯ ಗೌರವಾನ್ವಿತ ವನ್ಯಜೀವಿ ಪರಿಪಾಲಕ ರಾಜಗೋಪಾಲ ಶೆಟ್ಟಿ, ಕುದುರೆಮುಖ ವನ್ಯಜೀವಿ ವಿಭಾಗದ ಉಪ‌ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ ಎಸ್ ನೆಟಾಲ್ಕರ್, ಕುಂದಾಪುರ ವಿಭಾಗದ ಉಪ‌ಅರಣ್ಯ ಸಂರಕ್ಷಣಾ ಧಿಕಾರಿ ಗಣೇಶ ರೈ, ಅಂತರ್ಜಲ ವಿಶೇಷ ಪರಿಣಿತರು, ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ನಿವೃತ್ತ ಉಪನ್ಯಾಸಕ ರಿಚರ್ಡ್ ರೆಬಲ್ಲೋ, ರೀಸರ್ಚ್ ಸೈಂಟಿಸ್ಟ್ ಹರೀಶ್‌ಭಟ್ ಮತ್ತು ತಂಡ, ಜಿ.ಪಂ ಸದಸ್ಯೆ ಸುಪ್ರಿತಾ ದೀಪಕ್‌ಕುಮಾರ್ ಶೆಟ್ಟಿ, ತಾ.ಪಂ ಸದಸ್ಯ ಕೊಲ್ಲೂರು ರಮೇಶ ಗಾಣಿಗ ಉಪಸ್ಥಿತರಿದ್ದರು. ಮಂಜುನಾಥ ಶೆಟ್ಟಿ ಸ್ವಾಗತಿಸಿದರು.

ಹೇಳಿಕೆ: 1. ಪ್ರಕೃತಿಯಿಂದ ಮೊದಲು ಉಚಿತವಾಗಿ ನೀರು ಸಿಗುತ್ತಿತ್ತು, ಈಗ ಹದಿನೈದು ರೂಪಾಯಿಗೆ ಬಾಟಲಿ ನೀರು ಪಡೆಯಬೇಕು. 2040ರಲ್ಲಿ ಪರಿಸರ ಅಸಮತೋಲನದಿಂದ ನಮಗೆ ಬೇಕಾದಷ್ಟು ಆಮ್ಲಜನಕವನ್ನ ಕೈಯಲ್ಲಿ ಹಿಡಿದು ತಿರುಗಾಡುವ ಪರಿಸ್ಥಿತಿ ಬರಬಹುದು.- ರೀಸರ್ಚ್ ಸೈಂಟಿಸ್ಟ್ ಹರೀಶ್‌ಭಟ್.

2. ಪ್ರಕೃತಿಯ ಮಡಿಲು ನೈಸರ್ಗಿಕ ಗಾಳಿ, ಬೆಳಕು, ಶಾಮಿಯಾನ ರಹಿತ ಮರದ ನೆರಳಿನಲ್ಲಿ ಹಕ್ಕಿ-ಪಕ್ಷಿಗಳ ಕಲರವಗಳ ಮದ್ಯೆ ನಡೆದ ಈ ಸಮಾರಂಭ ವಿಶೇಷ ಜಾತ್ರೆಯ ಕಳೆಯಿಂದ ಕೂಡಿದೆ.- ರೀಸರ್ಚ್ ಸೈಂಟಿಸ್ಟ್ ಹರೀಶ್‌ಭಟ್.
Back to Home | Other News